Karnataka bhagawatha-from palm leaves to white paper !

By-Dr. M.  Y. Nataraj, Mary land, USA

8ನೇ ಶತಮಾನದಲ್ಲಿ ರಾಮಣ್ಣಯ್ಯ ಎಂಬುವವರು ಬರೆದ ಕರ್ನಾಟಕ ಭಾಗವತ ತಾಳೆಗರಿ ಗ್ರಂಥವನ್ನು ಮಿಸ್ಸೌರಿ ವಿಶ್ವವಿದ್ಯಾಲಯದ ಭೌತಶಾಸ್ತ್ರವಿಭಾಗದ ಪ್ರಮುಖರಾಗಿರುವ ಪ್ರೊ. ಹೊಳಲ್ಕೆರೆ ಚಂದ್ರಶೇಖರ್ ಕನ್ನಡಕ್ಕೆ ಅನುವಾದಿಸಿ ಪುಸ್ತಕ ರೂಪದಲ್ಲಿ ತಂದಿದ್ದಾರೆ.

ನಿಮ್ಮ ಮನೆಯ ಅಟ್ಟದ ಮೇಲೂ ತಾಳೆಗರಿ ಓಲೆಗರಿ ಗ್ರಂಥಗಳಿರಬಹುದು. ಅವುಗಳನ್ನು ತೆಗೆದು, ಧೂಳು ಕೊಡವಿ ಅದರಲ್ಲೇನಿದೆ ನೋಡುತ್ತೀರಾ? ಅಂಕಣಕಾರ : ಡಾ|| ಮೈ.ಶ್ರೀ. ನಟರಾಜ, ಪೊಟೊಮೆಕ್, ಮೇರೀಲ್ಯಾಂಡ್ ಕೆಲವು ವಾರಗಳ ಹಿಂದೆ ಮನೆಯಬಾಗಿಲ ಮುಂದೆ ಯು.ಪಿ.ಎಸ್ ತಂದಿಟ್ಟ ರಟ್ಟಿನ ಒಂದು ಪೆಟ್ಟಿಗೆ ಕಂಡಿತು. ಕೈಗೆತ್ತಿಕೊಂಡರೆ, ಸುಮಾರು ಹತ್ತು ಪೌಂಡುಗಳಿಗೆ ಕಮ್ಮಿಯಿಲ್ಲದ ತೂಕ. ತೆಗೆದು ನೋಡಿದರೆ, ಮುದ್ದಾದ ತಲೆಬರಹದ ಘಟ್ಟಿ ರಟ್ಟಿನ ಎರಡು ಸಂಪುಟಗಳು. ಒಂದೊಂದು ಸಂಪುಟದಲ್ಲೂ 700-800 ಪುಟಗಳು. ಪುಸ್ತಕವನ್ನು ಹರಡಿ ಸುಮ್ಮನೆ ಕಣ್ಣಾಡಿಸಿದರೆ, ಸುಮಾರು ಹನ್ನೆರಡು ಸಾವಿರ ಷಟ್ಪದಿಗಳಿಂದ ಕೂಡಿದ, ಅಲ್ಲಲ್ಲೇ ಅರ್ಥ, ತಾತ್ಪರ್ಯ, ಟೀಕೆ, ಟಿಪ್ಪಣಿ, ಅರ್ಥಸಹಿತ ಕಠಿಣ ಶಬ್ದಗಳ ಪಟ್ಟಿ, ಸಾರಾಂಶರೂಪದಲ್ಲಿ ಆಂಗ್ಲ ಅನುವಾದವೇ ಮುಂತಾದ ಅನೇಕ ವಿವರಗಳು ಗೋಚರವಾದವು. ಈ ಭಾಗವತ ಗ್ರಂಥದ ಸಂಪುಟಗಳು ಆತುರದಲ್ಲಿ ಕುಳಿತು ಓದುವಂಥವಲ್ಲ, ತಿಂಗಳುಗಟ್ಟಲೆ ಕುಳಿತು ವ್ಯವಧಾನದಿಂದ ಓದುವಂಥವು ಎನ್ನಿಸಿ ಪುಸ್ತಕದ ಬಗ್ಗೆ, ಅದನ್ನು ಪ್ರಕಟಿಸಿದವರಬಗ್ಗೆ ಅತ್ಯಂತ ಗೌರವಮೂಡಿ, ಮನಸ್ಸಿನಲ್ಲೇ ಕೈಮುಗಿದೆ.

ನನಗೆ ಈ ಗ್ರಂಥಗಳನ್ನು ಗೌರವಕಾಣಿಕೆಯಾಗಿ ಪ್ರೀತಿಯಿಂದ ಕಳಿಸಿದವರು ಹ್ಯೂಸ್ಟನ್ ಕನ್ನಡ ಗೆಳೆಯರಾದ ಸುಬ್ಬಿ ಸುಬ್ರಮಣ್ಯಮ್ ಮತ್ತು ವತ್ಸ ಕುಮಾರ್. ಸುಮ್ಮನೆ ಕೈಯಲ್ಲಿ ಹಿಡಿದುಕೊಂಡರೆ ಸಾಕು, ಮೈ ಝುಂ ಎನ್ನುವಂತೆ ಆಗುತ್ತದೆ. ಈ ಎರಡು ಸಂಪುಟಗಳನ್ನು ಈ ತಕ್ಷಣ ಓದದಿದ್ದರೂ ಮುಂದೆ ಓದಲೇಬೇಕಾದ ಪುಸ್ತಕಗಳ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದೇನೆ. ಅದಕ್ಕೆ ಸಮಯ ಬೇಕು, ತಾಳ್ಮೆ ಬೇಕು. ಅಂತಹ ದಿನಗಳಿಗಾಗಿ ಇನ್ನೂ ಕಾಯುತ್ತಲೇ ಇದ್ದೇನೆ! ಪುಸ್ತಕದ ಹೊರಕವಚದಮೇಲೆ ಕಣ್ಣಾಡಿಸಿದೆ. ಕರ್ಣಾಟಕ ಭಾಗವತವನ್ನು ಸಂಪಾದಿಸಿ ಪುನಃ ಸೃಷ್ಟಿಸಿದಾತನ ಭಾವಚಿತ್ರ ಕಂಡುಬಂತು.

ಇವರೇ, ಡಾ|| ಹೊಳಲ್ಕೆರೆ ಚಂದ್ರಶೇಖರ್! ಯಾರೀತ? ಇವರಿಗೇಕೆ ಭಾಗವತದ ಹುಚ್ಚು? ಎಂದು ಮುಂತಾಗಿ ಯೋಚಿಸುತ್ತಿರುವಾಗಲೇ, ಅವರ ಚಿತ್ರವನ್ನು ನೋಡಿದ ಕೂಡಲೇ ಬೆಂಗಳೂರಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ ಅವರೂ ಸಹ ವಿದ್ಯಾರ್ಥಿಯಾಗಿದ್ದುದು, ಅವರನ್ನು ಹಲವು ಬಾರಿ ಸಂಧಿಸಿದ್ದೂ ನೆನಪಾಯಿತು. ಅಪ್ರತಿಮನೂ ಮೇಧಾವಿಯೂ ಆಗಿದ್ದ ಈ ವಿದ್ಯಾರ್ಥಿ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಗ್ರಾಮದಲ್ಲಿ ಜನಿಸಿದವರು.

ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಪ್ರಥಮಸ್ಥಾನವನ್ನು ಪಡೆದುಕೊಂಡು ಕಾನ್‌ಪುರ್ ಐ.ಐ.ಟಿಯಲ್ಲಿ ಎಮ್.ಎಸ್ ಪದವಿ ಗಳಿಸಿ ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಮುಗಿಸಿ ಭೌತಶಾಸ್ತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿರುವ ಇವರು ಜರ್ಮನಿಯಲ್ಲಿ ಸ್ನಾತಕೋತ್ತರ ಸಂಶೋಧನೆ ಮಾಡಿ ಕೊಲಂಬಿಯಾದಲ್ಲಿರುವ ಮಿಸ್ಸೌರಿ ವಿಶ್ವವಿದ್ಯಾಲಯದ ಭೌತಶಾಸ್ತ್ರವಿಭಾಗದ ಪ್ರಮುಖರಾಗಿ ದುಡಿಯುತ್ತಿದ್ದಾರೆ.

1992ರಲ್ಲಿ ಭಾರತಕ್ಕೆ ಭೇಟಿಕೊಟ್ಟಾಗ ಅವರ ವಂಶದ ಹಿರಿಯರೊಬ್ಬರಾದ ರಾಮಣ್ಣಯ್ಯ ಎಂಬುವವರು 1755ರಲ್ಲಿ ಬರೆದಿಟ್ಟಿದ್ದ ತಾಳೆಗರಿ ಗ್ರಂಥ ಇವರ ಕಣ್ಣಿಗೆ ಬಿದ್ದು ಅದನ್ನು ಹೇಗಾದರೂ ಮಾಡಿ ಉತ್ತಮ ಮುದ್ರಣದಲ್ಲಿ ಪುಸ್ತಕರೂಪದಲ್ಲಿ ಪ್ರಕಟಿಸಬೇಕೆಂಬ ಉತ್ಕಟ ಅಪೇಕ್ಷೆಯನ್ನು ಹೊಂದಿ ಆ ಉದ್ಗ್ರಂಥವನ್ನು ತಮ್ಮೊಡನೆ ತಂದರು. ಇನ್ನೂ ಪುಡಿ-ಪುಡಿಯಾಗದೇ ಉಳಿದಿದ್ದ ಆ ಹಳೆಯ ಕಾಲದ ತಾಳೆಗರಿಯಮೇಲಿನ ಲಿಪಿಯನ್ನು ಗಣಕೀಕರಿಸಿ ಅದನ್ನು ಪರಿಷ್ಕರಿಸಲು ಸಹಸ್ರಾರು ಘಂಟೆಗಳ ಪರಿಶ್ರಮ ಅವರಿಗಾಗಿದೆ.

ತಾವು ಬರೆದದ್ದನ್ನು ಕೂಲಂಕಷವಾಗಿ ಓದಿ ತಿದ್ದಿ ಮತ್ತಷ್ಟು ಪರಿಶೋಧಿಸಲು ಒಂದು ಸಮಿತಿಯನ್ನೇ ರಚಿಸಿದ್ದರು. ಆ ಸಮಿತಿಯ ಅಧ್ಯಕ್ಷರು, ಡಾ|| ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು.

ಸದಸ್ಯರು:

ಜಿ.ಜಿ. ಮಂಜುನಾಥನ್,

ಪ್ರೊ|| ಎಚ್.ಎಸ್. ಹರಿಶಂಕರ್,

ಡಾ|| ಟಿ.ಎನ್. ನಾಗರತ್ನ,

ಡಾ|| ವೈ.ಸಿ. ಭಾನುಮತಿ,

ಶಿಕಾರಿಪುರ ಹರಿಹರೇಶ್ವರ,

ಪ್ರೊ|| ಎಚ್.ಆರ್. ರಾಮಕೃಷ್ಣ ರಾವ್.

ಈ ಉದ್ಗ್ರಂಥವನ್ನು ಪ್ರಕಟಿಸಲು ಬೇಕಾದ ಆರ್ಥಿಕಸಹಾಯವನ್ನು ಮಾಡಿದವರು ಅನೇಕರು. ಇವರುಗಳಲ್ಲಿ, ಕ್ಯಾಲಿಫೋರ್ನಿಯಾದ ಮಳವಳ್ಳಿ ಕುಟುಂಬದವರು, ಉಡುಪಿಯ ಕುಸುಮ ಚಂದ್ರಪಾಲ್, ಹ್ಯೂಸ್ಟನ್ನಿನ ಕನ್ನಡ ಫೌಂಡೇಶನ್, ಕನ್ನಡ ವೃಂದ, ಮತ್ತು ಟೆಕ್ಸಸ್ ಪ್ರಾಂತ್ಯದ ಅನೇಕ ಕನ್ನಡಾಭಿಮಾನಿಗಳೂ ಸೇರಿದ್ದಾರೆ. ಇತ್ತೀಚೆಗೆ ಭಾರತದಲ್ಲಿ ಲೋಕಾರ್ಪಣೆಗೊಂಡ ಈ ಜೋಡಿ ಸಂಪುಟಗಳು ಶಿಕಾಗೋದಲ್ಲಿ ನಡೆಯುವ ಸಮ್ಮೇಳನದಲ್ಲಿ ಸಹ ಮತ್ತೊಮ್ಮೆ ಹೊರನಾಡಿಗರಿಗೆ ಅರ್ಪಣೆಯಾಗಲಿವೆ. ವಿಶ್ವವಿದ್ಯಾಲಯಗಳಂಥ ದೊಡ್ಡ ದೊಡ್ಡ ಸಂಸ್ಥೆಗಳು ಮಾಡಬಹುದಾದ ಕೆಲಸಗಳನ್ನು ಒಬ್ಬೊಬ್ಬರೇ ಲೋಕದ ಯಾವುದೋ ಮೂಲೆಯಲ್ಲಿ ಕುಳಿತು ಕನ್ನಡ ನಾಡು ನುಡಿಗಳಿಂದ ದೂರವಿದ್ದರೂ ಇಂಥ ಮಹತ್ಕಾರ್ಯವನ್ನು ಮಾಡುತ್ತಿರುವರ ಬಗ್ಗೆ ಅಭಿಮಾನ ಉಕ್ಕುತ್ತದೆ. ಇಂಥಾ ಕೆಲಸಗಳಿಗೆ ಕರ್ನಾಟಕ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ ಮೊದಲಾದ ಹಣ ಮತ್ತು ಅಧಿಕಾರವುಳ್ಳ ಸಂಸ್ಥೆಗಳು ಎಷ್ಟು ಉತ್ತೇಜನ ಕೊಡುತ್ತಿವೆಯೋ, ಎಂಥ ನೆರವುಗಳನ್ನು ನೀಡುತ್ತಿವೆಯೋ, ನಾನರಿಯೆ. ಕೊನೇ ಪಕ್ಷ, ಕರ್ನಾಟಕದ ಎಲ್ಲಾ ಗ್ರಂಥಾಲಯಗಳೂ, ಶಾಲಾ ಕಾಲೇಜುಗಳ ಕನ್ನಡ ವಿಭಾಗಗಳೂ ಕೊಂಡುಕೊಳ್ಳುವಂತೆ ಮಾಡಲಾಗಿದೆಯೋ ಇಲ್ಲವೋ ಅದನ್ನೂ ನಾನರಿಯೆ. ಸರ್ಕಾರ ಕೊಡುವ ಹಣದಿಂದ ಪುಸ್ತಕಗಳನ್ನು ವಿವಿಧ ಸಂಸ್ಥೆಗಳು ಕೊಳ್ಳಬೇಕಾದ ಸಂದರ್ಭಗಳಲ್ಲಿ ಸಾಕಷ್ಟು ರಾಜಕೀಯ, ಲಂಚಕೋರತನ ಮತ್ತು ಸ್ವಜನ ಪಕ್ಷಪಾತ ನಡೆಯುತ್ತದೆಯೆಂದು ಕೇಳಿದ್ದೇನೆ.

ಕೇವಲ ಕನ್ನಡ ಅಭಿಮಾನದಿಂದ ಇಂಥಾ ಕೆಲಸಗಳಲ್ಲಿ ಹ್ಯೂಸ್ಟನ್ ಕನ್ನಡಿಗರು ವಹಿಸುತ್ತಿರುವ ಆಸ್ಥೆ ಮಾತ್ರ ಹೆಮ್ಮೆ ಪಡುವಂಥಾದ್ದು. ಮಿಲಿಯಗಟ್ಟಲೆ ದುಡ್ಡು ಖರ್ಚು ಮಾಡಿ ನಡೆಸುವ ಸಮ್ಮೇಳನ ಗಳು (ಅವು ಭಾರತದಲ್ಲೇ ಆಗಲಿ ಅಮೇರಿಕದಲ್ಲೆ ಆಗಲಿ), ಅದರ ಒಂದು ಸಣ್ಣ ಅಂಶವನ್ನಾದರೂ ಇಂಥಾ ಕಳೆದು ಹೋಗಬಹುದಾದ ಗ್ರಂಥಗಳನ್ನು ಉಳಿಸಿಕೊಳ್ಳುವ ಯತ್ನಕ್ಕಾಗಿ ಮುಡಿಪಾಗಿಟ್ಟರೆ ಹೇಗೆ ಎಂಬ ಚಿಂತೆ ನನ್ನನು ಕಾಡುತ್ತಿದೆ.

ನನಗೇ ನೆನಪಿರುವಂತೆ, ಅನೇಕ ಮನೆಗಳ ಅಟ್ಟಗಳಲ್ಲಿ ಕಾಗದಮೇಲಿನ ಕೈಬರಹದ ಮತ್ತು ಅಪರೂಪಕ್ಕೆ ತಾಳೆಗರಿಯಮೇಲೆ ಬರೆದ ಕನ್ನಡ, ಸಂಸ್ಕೃತ ಮತ್ತು “ಬಾಳಬಂಧು” ಲಿಪಿಗಳಲ್ಲಿದ್ದ ಕಟ್ಟುಗಳನ್ನು ನಾನೇ ನೋಡಿದ್ದೇನೆ. ಅವುಗಳಬಗ್ಗೆ ಯಾರಿಗೂ ಅಂಥಾ ಹೇಳಿಕೊಳ್ಳುವಂಥ ಆಸಕ್ತಿಯಾಗಲೀ ಕುತೂಹಲವಾಗಲೀ ಇದ್ದಂತಿರಲಿಲ್ಲ.

“ಯಾರೋ ಹಿರಿಯರು ಏನೋ ಬರೆದಿಟ್ಟಿದ್ದಾರೆ, ಅದನ್ನು ಮುಟ್ಟಬೇಡ” ಎಂದು ಬೆದರಿಸುವ ತಂದೆತಾಯಿಗಳೇ ಹೆಚ್ಚು.

ಸರಸ್ವತಿ ಪೂಜೆಯದಿನ ಅವುಗಳನ್ನು ಇಟ್ಟು ಪೂಜಿಸುತ್ತಿದ್ದವರು ಅದರೊಳಗೆ ಏನಿರಬಹುದೆಂಬ ಒಂದಿಷ್ಟೂ ಉತ್ಸಾಹವನ್ನು ತೋರದೇ ಇರುತ್ತಿದ್ದುದನ್ನೂ ನಾನೇ ಕಂಡಿದ್ದೇನೆ. ಈಗಿನ ಕಾಲದ ಮನೆಗಳಲ್ಲಿ ಅಟ್ಟಗಳೂ ಇಲ್ಲ, ರದ್ದೀ ಕಾಗದದಲ್ಲಿ ಬರೆದಿಟ್ಟ ಕಡಿತಗಳಂತೂ ಇಲ್ಲವೇಯಿಲ್ಲ.

ಇನ್ನು ತಾಳೆಗರಿಯನ್ನು ತೆಗೆದು ಓದಿ ಪರಿಷ್ಕರಿಸುವ ಪ್ರಶ್ನೆ ಎಲ್ಲಿ ಬರಬೇಕು. ಎಲ್ಲೋ ಅಲ್ಲೊಬ್ಬ ಇಲ್ಲೊಬ್ಬ ಕೋಟಿಯಲ್ಲೊಬ್ಬ ಹೊಳಲ್ಕೆರೆ ಚಂದ್ರಶೇಖರ್ ಇದ್ದಾರಲ್ಲ ಅಷ್ಟೇ ತೃಪ್ತಿಯ ವಿಷಯ!

ಹೀಗೇ ಬೆಲೆಬಾಳುವ ಗ್ರಂಥಗಳು ಅಟ್ಟಗಳಿಂದ ಹೊರಬರಲಿ,

ಮುದ್ರಣಗೊಳ್ಳಲಿ,

ಕಣ್ಮರೆಯಾಗಿ ನಶಿಸದಿರಲಿ,

ಭವಿಷ್ಯಕ್ಕಾಗಿ ಉಳಿದುಕೊಳ್ಳಲಿ

ಎಂಬ ಆಶಾವಾದವನ್ನು ಭರಿಸುತ್ತೇನೆ.

Read more at: http://kannada.oneindia.com/column/nataraj/2008/0710-karnataka-bhagavata-holalkere-chandrashekhar.html

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s